ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 2025-26ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಎಚ್.ಡಿ ಅಧ್ಯಯನ ಪ್ರಾರಂಭಿಸಿರುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ನೀಡಲು ಅರ್ಜಿ ಆಹ್ವಾನಿಸಿದೆ.
ರಾಜ್ಯದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿ/ಅಧೀನಕ್ಕೆ ಒಳಪಡುವ ಹಾಗೂ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಪ್ರವರ್ಗ-I, II(ಎ), III(ಎ) ಹಾಗೂ III(ಬಿ)ಗೆ ಸೇರಿದ ಅರ್ಹ ಅಭ್ಯರ್ಥಿಗಳಿಗೆ ಮಾಹೆಯಾನ 10,000ರೂ. ವರೆಗೆ ವ್ಯಾಸಂಗ ವೇತನ/ಫೆಲೋಶಿಪ್ ಅನ್ನು ನೀಡಲಾಗುತ್ತದೆ. ಸದರಿ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಇಚ್ಚಿಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2026ರ ಜನವರಿ 09 ರೊಳಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜನವರಿ 09, 2026
ಅರ್ಜಿ ಸಲ್ಲಿಸಲು ಇರಬೇಕಾದ ಸಾಮಾನ್ಯ ಅರ್ಹತೆಗಳು:
• ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
• ಅಭ್ಯರ್ಥಿಯು ಹಿಂದುಳಿದ ವರ್ಗಗಳ ಪ್ರವರ್ಗ- 1 II(ಎ), III(ಎ) ಅಥವಾ 11(ಬಿ) ವರ್ಗಕ್ಕೆ ಸೇರಿದವರಾಗಿರಬೇಕು.
• ಅಭ್ಯರ್ಥಿಯ ಅಥವಾ ಕುಟುಂಬದ ವಾರ್ಷಿಕ ಆದಾಯ ಪ್ರವರ್ಗ-1 ಅಭ್ಯರ್ಥಿಗಳಿಗೆ 4.50ಲಕ್ಷರೂ. ಹಾಗೂ ಪ್ರವರ್ಗ-II(ಎ), III(ಎ) ಮತ್ತು III(ಬಿ) ಅಭ್ಯರ್ಥಿಗಳಿಗೆ – 3.50ಲಕ್ಷರೂ. ಮಿತಿಯೊಳಗಿರಬೇಕು.
• ಕೇಂದ್ರ ಸರ್ಕಾರ/ರಾಜ್ಯ ಸರ್ಕಾರ/ಅನುದಾನಿತ ಸಂಸ್ಥೆ/ಸಾರ್ವಜನಿಕ ಸ್ವಾಮ್ಯತೆಗೆ ಒಳಪಟ್ಟ ಸಂಸ್ಥೆಗಳ ಉದ್ಯೋಗಿಗಳು ಈ ಸೌಲಭ್ಯವನ್ನು ಪಡೆಯಲು ಅರ್ಹರಲ್ಲ.
• ಅಭ್ಯರ್ಥಿಯು ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿ/ಅಧೀನಕ್ಕೆ ಒಳಪಡುವ ಹಾಗೂ ಕರ್ನಾಟಕದಲ್ಲಿರುವ ಸಂಸ್ಥೆಗಳಲ್ಲಿ 2025-26ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರಬೇಕು.
• ಈ ಸೌಲಭ್ಯವನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಯು ಭಾರತ ಸರ್ಕಾರ/ಕರ್ನಾಟಕ ಸರ್ಕಾರ/ವಿಶ್ವವಿದ್ಯಾಲಯ ಅಥವಾ ಇತರೆ ಯಾವುದೇ ಸಂಸ್ಥೆಗಳಿಂದ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಗೆ ಆಯ್ಕೆಯಾಗಿರಬಾರದು.
• ಅಭ್ಯರ್ಥಿಯು ಪಿಎಚ್.ಡಿ ಅಧ್ಯಯನವನ್ನು ಅರ್ಧದಲ್ಲಿ ಮೊಟಕುಗೊಳಿಸಬಾರದು. ಮೊಟಕುಗೊಳಿಸಿದಲ್ಲಿ ಅಂತಹ ಅಭ್ಯರ್ಥಿಗೆ ನೀಡಿದ ವ್ಯಾಸಂಗ ವೇತನ/ಫೆಲೋಶಿಪ್ ಮೊತ್ತವನ್ನು ಸಂಬಂಧಪಟ್ಟ ಅಭ್ಯರ್ಥಿ ಹಾಗೂ ಅವರ ತಂದೆ-ತಾಯಿ/ಪೋಷಕರು ಸರ್ಕಾರಕ್ಕೆ ಹಿಂದಿರುಗಿಸಬೇಕಾಗುತ್ತದೆ.
• ಒಂದೇ ಕುಟುಂಬದ ಗರಿಷ್ಠ ಇಬ್ಬರು ಗಂಡು ಮಕ್ಕಳು ಮಾತ್ರ ಈ ಯೋಜನೆಗೆ ಅರ್ಹರು. ಆದರೆ ಈ ನಿರ್ಬಂಧ ಹೆಣ್ಣು ಮಕ್ಕಳಿಗೆ ಅನ್ವಯಿಸುವುದಿಲ್ಲ.
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಶೇ.55% ಅಂಕಗಳೊಂದಿಗೆ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು ಹಾಗೂ ವಿಶ್ವವಿದ್ಯಾಲಯ/ಅಧಿಕೃತ ಸಂಸ್ಥೆಗಳಲ್ಲಿ ಸಂಶೋಧನಾ ಮಾರ್ಗದರ್ಶಕರ ಅಡಿಯಲ್ಲಿ ಪಿಎಚ್.ಡಿ ಅಧ್ಯಯನಕ್ಕಾಗಿ ನೋಂದಣಿ ಮಾಡಿಕೊಂಡಿರಬೇಕು.
ಪೂರ್ಣಾವಧಿ ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಮಾಸಿಕ 10,000ರೂ.ಗಳಂತೆ ಗರಿಷ್ಠ 03 ವರ್ಷಗಳ ಅವಧಿಗೆ ಹಾಜರಾತಿಗೆ ಅನುಗುಣವಾಗಿ ವ್ಯಾಸಂಗ ವೇತನ/ಫೆಲೋಶಿಪ್ ಅನ್ನು ಪ್ರತಿ ತಿಂಗಳು ನೀಡಲಾಗುತ್ತದೆ.
ಆಯ್ಕೆ ವಿಧಾನ:
ಸದರಿ ಯೋಜನೆಯಡಿ ಅಭ್ಯರ್ಥಿಗಳನ್ನು ಸ್ನಾತಕೋತ್ತರ ಪದವಿಯಲ್ಲಿ ಪಡೆದಿರುವ ಅಂಕಗಳು, ಪ್ರವರ್ಗವಾರು ಮೀಸಲಾತಿ ಹಾಗೂ ಅನುದಾನ ಲಭ್ಯತೆಗೆ ಅನುಗುಣವಾಗಿ ಆಯ್ಕೆ ಮಾಡಲಾಗುವುದು.
ಛಾಪಾ ಕಾಗದ ಸಲ್ಲಿಕೆ:
ಅಭ್ಯರ್ಥಿಗಳು ಇಲಾಖಾ ವೆಬ್-ಸೈಟ್ ನಲ್ಲಿ ಲಭ್ಯವಿರುವ ಮುಚ್ಚಳಿಕೆ ಪತ್ರದ ನಮೂನೆಯೊಂದಿಗೆ 100ರೂ. ಛಾಪಾ ಕಾಗದ [ಒಂದನೇ ಪಾರ್ಟಿ ಅಭ್ಯರ್ಥಿ ಹಾಗೂ 2ನೇ ಪಾರ್ಟಿ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು] ಎಂಬುದಾಗಿ ಮಾಹಿತಿ ನಮೂದಿಸಿ ಸಹಿಗಳನ್ನೊಳಗೊಂಡ ಒರಿಜಿನಲ್ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:
ಅಭ್ಯರ್ಥಿಯ 2 ಭಾವಚಿತ್ರಗಳು
ಎಸ್.ಎಸ್.ಎಲ್.ಸಿ/10ನೇ ತರಗತಿಯ ಅಂಕಪಟ್ಟಿ.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ವಾಸಸ್ಥಳ ಪ್ರಮಾಣ ಪತ್ರ
ಸ್ನಾತಕೋತ್ತರ ಪದವಿಯ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಗಳು
ಪಿಎಚ್.ಡಿ ಅಧ್ಯಯನಕ್ಕಾಗಿ ನೋಂದಣಿ ಮಾಡಿರುವ ಬಗ್ಗೆ ವಿಶ್ವವಿದ್ಯಾಲಯ/ಅಧಿಕೃತ ಸಂಸ್ಥೆಯಿಂದ ಪ್ರಮಾಣ ಪತ್ರ (ಇದರಲ್ಲಿ ನೋಂದಣಿ ದಿನಾಂಕವು ಕಡ್ಡಾಯವಾಗಿ ನಮೂದಾಗಿರಬೇಕು) ಇತ್ಯಾದಿ.
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
• ಅಭ್ಯರ್ಥಿಗಳು ಮೊದಲಿಗೆ BCWD ಅಧಿಕೃತ ಜಾಲತಾಣ https://bcwd.karnataka.gov.in/157/inviting-applications-for-phd-2025-26/kn ಕ್ಕೆ ಭೇಟಿ ನೀಡಿ.
• ಯೋಜನೆಯ ವಿವರವಾದ ಮಾಹಿತಿ ಹಾಗೂ ಪಿ.ಹೆಚ್.ಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಂಡು.
• ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿಗಳನ್ನು ನಮೂದಿಸಿ.
• ಮುಚ್ಚಳಿಕೆ ಪತ್ರದ ನಮೂನೆ, ವಿಶ್ವವಿದ್ಯಾಲಯದಿಂದ ದೃಢೀಕರಣ ಪತ್ರದ ನಮೂನೆ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• ಅರ್ಜಿ ಹಾಗೂ ಎಲ್ಲಾ ದಾಖಲೆಗಳ ಒಂದು ಸೆಟ್ ದೃಢೀಕೃತ ಪ್ರತಿಯನ್ನು ಅಭ್ಯರ್ಥಿಗಳು ಪಿಎಚ್.ಡಿ ಅಧ್ಯಯನ ಮಾಡುತ್ತಿರುವ ವಿಶ್ವವಿದ್ಯಾಲಯ/ಸಂಸ್ಥೆ ಇರುವಂತಹ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಜನವರಿ 09ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ: ಸಹಾಯವಾಣಿ ಸಂಖ್ಯೆ 8050770004ಗೆ ಸಂಪರ್ಕಿಸಬಹುದು.