ಬದಲಾವಣೆಯ ಬೆಳಕು…
ನನಗೆ ಬದಲಾವಣೆ ಅನಿವಾರ್ಯವಾಗಿತ್ತು! ನನ್ನನ್ನೇ ನಾನು ಬದಲಾಯಿಸಿಕೊಳ್ಳಬೇಕಿತ್ತು! ಸಮಾಜವನ್ನು ಬದಲಾಯಿಸುವುದು ನನ್ನಿಂದ ಅಸಾಧ್ಯವಾಗಿತ್ತು! ಅಷ್ಟೇ ಅಲ್ಲ ಅದು ನನಗೆ ಅಪ್ರಸ್ತುತವಾಗಿತ್ತು. ಕಾರಣವಿಷ್ಟೇ ನನ್ನನ್ನೇ ನಾನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲದದ್ದಾಗ, ಜಗತ್ತನ್ನು ಜಯಿಸುವುದು ಸಾಧ್ಯವೇ!? ಅದರ ಅವಶ್ಯಕತೆಯೂ ಇವತ್ತು ಯಾರಿಗೂ ಇಲ್ಲ ಅಂತ ಅನ್ಸುತ್ತೆ! ಕಾರಣ ಇಷ್ಟೇ ಇರಬಹುದು ನಾವು ಎಷ್ಟೇ ಹೇಳಿದರೂ ಈ ಸಮಾಜದಲ್ಲಿ ಜನರು ತಮ್ಮ ಮನಸೋ ಇಚ್ಛೆ ಬದುಕಲು ಇಷ್ಟಪಡುತ್ತಾರೆ. ಅದು ಜನರಿಗೆ ಕಷ್ಟ ಕೊಟ್ಟಾದರೂ ಸರಿ ನಾವು ಅಂದುಕೊಂಡಂತೆ ಬದುಕಬೇಕು ಎನ್ನುವುದು ಇಂದಿನ ಸಮಾಜದ ಮನಸ್ಥಿತಿಯಾಗಿದೆ.
ನೀವು ಇಷ್ಟ ಪಟ್ಟಂತೆ ಬದುಕುವುದು ತಪ್ಪಲ್ಲ ಇನ್ನೊಬ್ಬರಿಗೆ ತೊಂದರೆ ಆಗದಂತೆ ಬದುಕುವುದು ಈ ಪ್ರಕೃತಿಯ ನಿಯಮವಾಗಿದೆ. ಅದಕ್ಕಾಗಿಯೇ ಪ್ರಕೃತಿ ನಮಗ ಆಗಾಗ ತನ್ನ ವಿಕೃತಿಯನ್ನು ಮೆರೆದು ಮಾನವನಿಗೆ ಪಾಠವನ್ನು ಹೇಳುತ್ತಲೇ ಬಂದಿದೆ. ಅದೆಷ್ಟೋ ಅಧ್ಯಾಯಗಳನ್ನು ಈಗಾಗಲೇ ಮುಗಿಸಿದೆ, ಆ ಎಲ್ಲಾ ಅಧ್ಯಾಯಗಳು ಅತ್ಯುತ್ತಮವಾದ ಪಾಠಗಳೇ ಆಗಿವೆ. ಆದರೂ ನಮಗೆ ಒಂದು ಪಾಠದ ನೆನಪಿಲ್ಲ! ಅದು ಸುನಾಮಿ ಇರಬಹುದು, ಜ್ವಾಲಾಮುಖಿ ಸ್ಪೋಟವಿರಬಹುದು, ಪ್ರಬಲ ಭೂಕಂಪವಿರಬಹುದು, ನೆರೆಹಾವಳಿಯಿಂದ ಅಪಾರ ಆಸ್ತಿಪಾಸ್ತಿ ಕಳೆದುಕೊಂಡು ಬಂಧು ಬಳಗವನ್ನು ಕಳೆದುಕೊಂಡ ಮನುಕುಲದ ವಿನಾಶವಿರಬಹುದು ಮತ್ತು ಜಗತ್ತಿನ ಶರವೇಗದ ಓಟಕ್ಕೆ ಕಡಿವಾಣ ಹಾಕಿದ ಮಹಾಮಾರಿ ಇತ್ತೀಚಿನ ಕರೋನಾದ ಕರಾಳ ನೆನಪುಗಳು ಮಾಸುವ ಮುನ್ನವೇ ಜಗತ್ತು ಮತ್ತೆ ಅದೇ ವೇಗವನ್ನು ಜಾರಿಯಲ್ಲಿಟ್ಟು ಸಾಗುತ್ತಿದೆ.
ನನ್ನವರೆಲ್ಲರನ್ನು ಕಳೆದುಕೊಂಡ ಆ ನೆನಪುಗಳು ಈಗ ತೆರೆಮರೆಗೆ ಸರಿದು, ಮತ್ತೆ ಅದೇ ಬದುಕನ್ನು ಕಟ್ಟಿಕೊಂಡು ಸಾಗುತ್ತಿದ್ದೇವೆ. ಅದೇ ಹಣದ ಗಳಿಕೆಯಲ್ಲಿ ತೊಡಗಿದ್ದೇವೆ! ಎಲ್ಲರೂ ಹಣವಂತರಾಗುತ್ತಿದ್ದೇವೆ. ಹೃದಯವಂತಿಕೆ ಮರೆತಿದ್ದೇವೆ. ಅದೆಷ್ಟೋ ಬಡವರ ಬಾಳು ಇನ್ನೂ ಕೂಡ ಗೋಳಿನಿಂದ ಆಚೆ ಬರದೇ ಹೆಣಕಾಡುತ್ತಿದೆ. ಸಾಕಷ್ಟು ಯೋಜನೆಗಳನ್ನು ಅವರ ಹೆಸರಿನಲ್ಲಿ ಮಾಡಿದ್ದೇವೆ. ಅವುಗಳನ್ನು ನಾವೇ ಅನುಭವಿಸುತಿದ್ದೇವೆ. ಇದಕ್ಕೆ ನಾವು ಹಲವಾರು ಅಡ್ಡದಾರಿಗಳನ್ನು ಹುಡುಕಿದ್ದೇವೆ. ಸ್ವಜನ ಪಕ್ಷಪಾತಕ್ಕೆ ಜಾರಿಯಲ್ಲಿಟ್ಟು, ಹಲವಾರು ಯೋಜನೆಗಳನ್ನು ಗಿಟ್ಟಿಸಿಕೊಂಡಿದ್ದೇವೆ. ಇದಕ್ಕಾಗಿ ರಾಜಕೀಯ ಶಿಫಾರಸ್ಸುಗಳನ್ನು ಒತ್ತಡಗಳನ್ನು ಅಧಿಕಾರಿಗಳ ಮೇಲೆ ಆಗಾಗ ಬಳಸುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನೈಜ ಫಲಾನುಭವಿಗಳು ಅನುಭವಿಸುವ ಕಷ್ಟಗಳಿಗೆ ನಾವೇ ಹೊಣೆಗಾರರಾಗಿದ್ದೇವೆ. ಅದೆಷ್ಟೇ ಯೋಜನೆಗಳನ್ನು ಶಾಸಕಾಂಗಗಳು ತಂದರು ಕೂಡ ಕೆಳಹಂತದ ರಾಜಕೀಯ ವ್ಯವಸ್ಥೆ ಸರಿಯಾಗಿ ಇಲ್ಲದಿದ್ದರೆ ಸಮರ್ಪಕವಾಗಿ ಅವುಗಳು ಯಾರಿಗೂ ತಲುಪಲು ಸಾಧ್ಯವಿಲ್ಲ! ಸ್ಥಳೀಯ ಆಡಳಿತ ಅತ್ಯಂತ ಪಾರದರ್ಶಕತೆಯಿಂದ ಕಾರ್ಯನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಅವಶ್ಯಕತೆ ಇಂದು ಎದ್ದು ಕಾಣುತ್ತಿದೆ.
ಅದೆಷ್ಟು ಗಳಿಸಿದರೆ ಏನು!? ಕೊನೆಗೆ ತೆಗೆದುಕೊಂಡು ಹೋಗಲು ಸಾಧ್ಯವಿದೆಯೇ!! ಅದು ಎಲ್ಲರಿಗೂ ಗೊತ್ತು! ಮಹಾನುಭಾವರ ವಾಣಿಗಳನ್ನು ಪುರಾಣಗಳನ್ನು ನಿತ್ಯವೂ ಕೇಳುತ್ತೇವೆ. ಕೇಳಿದಾಗ ನಿತ್ಯವೂ ಸತ್ಯ ಮಾತನಾಡುವ ಪ್ರಮಾಣವನ್ನು ಮನಸ್ಸಿನಲ್ಲಿ ಮಾಡಿದರು ಕೂಡ ಅದು ಕನಸಿನಲ್ಲಿಯೂ ಸಾಧ್ಯವಾಗದಿರುವುದು ವಿಪರ್ಯಾಸವೇ ಸರಿ! ಪುರಾಣ ಪ್ರವಚನಗಳ ಸಾಲುಗಳು ನಮಗೆ ಕ್ಷಣಿಕ ತಿಳುವಳಿಕೆ ನೀಡುವ ಸಾಧನಗಳಾಗಿವೆ. ಅಂತಹ ಮಹಾನುಭಾವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಲು ಸೋತಿದ್ದೇವೆ.
ಆಸೆಯೆಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯ?
ರೋಷವೆಂಬುದು ಯಮದೂತರಿಗಲ್ಲದೆ ಅಜಾತರಿಗುಂಟೆ ಅಯ್ಯ? ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ದೂರ ಮಾರಯ್ಯ.
– ಆಯ್ದಕ್ಕಿ ಲಕ್ಕಮ್ಮ
ಸ್ವಾರ್ಥದ ಹೊಳೆಯಲ್ಲಿ ಕಳೆದುಹೋಗುತ್ತಿರುವ ಸಮಾಜಕ್ಕೆ ವಚನ, ಪ್ರಕೃತಿ,ಪುರಾಣ- ಮಾನವೀಯತೆ ಕಳೆದುಕೊಂಡಾಗ ಸಮಾಜ ಕುಸಿಯುತ್ತದೆ:ಸ್ವಾರ್ಥದ ಕಾಲದಲ್ಲಿ ಪ್ರಾಮಾಣಿಕ ಬದುಕಿನ ಹುಡುಕಾಟ
12ನೇ ಶತಮಾನದ ವಚನಗಳು ಇಂದಿಗೂ ಏಕೆ ಪ್ರಸ್ತುತ?
ಅದ್ಭುತ ವಚನದ ಸಾಲಿನಲ್ಲಿ ನಮ್ಮ ಸಾರವತ್ತಾದ ಬದುಕಿನ ಬಗ್ಗೆ ಆಯ್ದಕ್ಕಿ ಲಕ್ಕಮ್ಮ ಅವರು ಹೀಗೆ ಹೇಳಿದ್ದಾರೆ. ಈ ಅದ್ಭುತ ಸಾಲುಗಳು ನಮ್ಮ ಪ್ರಾಮಾಣಿಕ ಬದುಕಿಗೆ ಹಿಡಿದ ಕೈಗನ್ನಡಿಯಾಗಿವೆ. 12ನೇ ಶತಮಾನದಲ್ಲಿ ಆ ಶಿವಶರಣೆಯರಲ್ಲಿ ಇದ್ದ ಪ್ರಾಮಾಣಿಕತೆ, ಕಾಯಕ ನಿಷ್ಠೆ ಬಗ್ಗೆ ತಿಳಿಸುತ್ತಾ ಇಂದಿನ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಈ ವಚನಗಳು ಮಾಡುತ್ತವೆ. ಆಸೆ ಎಂಬುದು ಅರಸನಿಗೆ ಇರಬೇಕೇ ವಿನಹ ಶಿವಭಕ್ತರಿಗೆ ಅಲ್ಲ! ಎನ್ನುವ ಮಾತು ಇಂದಿಗೂ ಧ್ವನಿತವಾಗುತ್ತದೆ. ಇದಲ್ಲದೆ ಈಸಕ್ಕಿ ಆಸೆ ನಮಗೇಕೆ!? ಎಂದು ತನ್ನ ಪತಿರಾಯ ಮಾರಯ್ಯನಿಗೆ ಕೇಳುವ ಅವಳ ಈ ಭಾವ ಇಂದಿನ ಸ್ವಾರ್ಥ ಪ್ರಪಂಚದ ಸಮಾಜಕ್ಕೆ ಪ್ರಶ್ನೆ ಮಾಡುವ ರೀತಿ! ಇಂದಿಗೂ ಪ್ರಸ್ತುತವಾಗಿದೆ. ಮನುಕುಲದಲ್ಲಿ ಸ್ವಾರ್ಥ ತಾಂಡವಾಡುತ್ತಿದೆ. ಅಂತಹ ಸ್ವಾರ್ಥದಿಂದ ಅದೆಷ್ಟೋ ಜನರ ಕನಸುಗಳು ಕಮರಿವೆ! ನೈಜ ಫಲಾನುಭವಿಗಳ ಸ್ಥಿತಿ ಡೋಲಾಯಮಾನ ಸ್ಥಿತಿಯಲ್ಲಿದೆ. ಮೂಲಭೂತ ಸೌಕರ್ಯಗಳಿಲ್ಲದೆ ಅದೆಷ್ಟೋ ಜನರ ಬದುಕು-ಬವಣೆ ಕಂಡು ಇಂದಿಗೂ ಮನುಕುಲ ತಲೆತಗ್ಗಿಸಲೇಬೇಕು! ಮೈಬಗ್ಗಿಸಿ ದುಡಿಯಬೇಕಾದ ಇಂದಿನ ಸಮಾಜ ಅಡ್ಡ ದಾರಿಯಲ್ಲಿ ದುಡ್ಡು ಮಾಡುವುದನ್ನೆ ತಮ್ಮ ಕಸುಬಾಗಿಸಿಕೊಂಡಿದ್ದಾರೆ. ಇದರಿಂದ ಯಾರಿಗೋ ಸೇರಬೇಕಾದ ಯೋಜನೆ ಇನ್ನೊಬ್ಬರ ಪಾಲಾಗಿ! ಬಡವರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಅಲ್ಲಿಯೇ ಉಳಿದಿದೆ.
ಇದಕ್ಕೆ ಕಡಿವಾಣ ಹಾಕಲು ಏನು ಮಾಡಬೇಕು! ಉದಾರ ಮನಸ್ಸು ನಮ್ಮದಾಗಬೇಕು. ದೇಶ ಸೇವೆಯೇ ಈಶ ಸೇವೆ ಆಗಬೇಕು. ಇನ್ನೊಬ್ಬರ ಅನ್ನಕ್ಕೆ ಕೈ ಹಾಕುವ ಬದಲಿಗೆ ನಮ್ಮ ತಟ್ಟೆಗೆ ನೊಣ ಬೀಳದಂತೆ ನೋಡಿಕೊಳ್ಳಬೇಕು. ಲೂಟಿ ಮಾಡಿ ಸಿರಿವಂತರಾಗುವುದಕ್ಕಿಂತ ದುಡಿಮೆಯಲ್ಲಿ ಸಿರಿವಂತರಾಗಬೇಕು. ಅಂತಹ ಶುದ್ಧ ಸಂಸ್ಕೃತಿಯ ವ್ಯವಸ್ಥೆ ನಮ್ಮದಾಗಬೇಕು. ಅದನ್ನು 21ನೇ ಶತಮಾನದಲ್ಲಿ ನಿರೀಕ್ಷೆ ಮಾಡುವುದು ಕಷ್ಟ ಸಾಧ್ಯ! ಆದರೂ ಇಂದಿನ ಯುವ ಜನಾಂಗ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ. ಈಗಲೂ ಅದೆಷ್ಟೋ ಜನರು ಸಮಾಜಕ್ಕಾಗಿ ತಮ್ಮ ತನು ಮನ ಧನವನ್ನು ಸಮರ್ಪಣೆ ಮಾಡಿಕೊಂಡಿದ್ದಾರೆ. ಅಂತಹ ಮಹನೀಯರ ಬಗ್ಗೆ ಎಲ್ಲರೂ ಇಂದಿಗೂ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಂತವರ ಪೈಕಿ ನಾವು ಒಬ್ಬರಾಗಬೇಕು ಅಂದಾಗ ಮಾತ್ರ ಸನ್ಮಾರ್ಗದಡೆ ನಡೆಯಬಹುದು. ಸಮಾಜಕ್ಕಾಗಿ! ಸಮಾಜವನ್ನು ಕಟ್ಟುವುದಕ್ಕಾಗಿ! ಒಂದು ಕನಸನ್ನಾದರೂ ಕಟ್ಟೋಣ ಬನ್ನಿ!



