ಪ್ರಸಕ್ತ ಸಾಲಿಗೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆಗಸ್ಟ್ 2ರಂದು ಬಿಡುಗಡೆ ಮಾಡಿದೆ.
ವೈದ್ಯಕೀಯ, ದಂತ ವೈದ್ಯಕೀಯ, ಹೋಮಿಯೋಪತಿ, ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್, ಫಾರ್ಮ-ಡಿ, ಬಿ.ಎಸ್.ಸಿ (ನರ್ಸಿಂಗ್), ಯೋಗ ಮತ್ತು ನ್ಯಾಚುರೋಪತಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್ ಮುಂತಾದ ಕೋರ್ಸುಗಳ ಪ್ರವೇಶಕ್ಕಾಗಿ ಜು.29ವರೆಗೆ ಸಲ್ಲಿಕೆಯಾದ ಇಚ್ಛೆ/ಆಯ್ಕೆಗಳನ್ನು ಪರಿಗಣಿಸಿ ಶುಕ್ರವಾರ(ಆ.1) ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಿತ್ತು, ಇದೀಗ ಸದರಿ ಸುತ್ತಿನ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಪ್ರಾಧಿಕಾರದ ವೆಬ್ಸೈಟ್ https://cetonline.karnataka.gov.in/kea/ನ ಮೂಲಕ ಪರಿಶೀಲನೆ ಮಾಡಬಹುದಾಗಿದೆ.
ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಇಚ್ಛೆ/ಆಯ್ಕೆಗಳನ್ನು, ಶುಲ್ಕ ಪಾವತಿಸಲು, ಆಯಾ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಆಗಸ್ಟ್ 2 ರಿಂದ 7ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.