ಬೆಂಗಳೂರು: ಕಲ್ಯಾಣ ಕರ್ನಾಟಕ ವೃಂದದ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅ.25ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಭಾನುವಾರ ಬಿಡುಗಡೆಗೊಳಿಸಿದೆ.
ಸಾಮಾನ್ಯ ಜ್ಞಾನ(ಪತ್ರಿಕೆ-1) ವಿಷಯ ಪತ್ರಿಕೆಯು ಬೆಳಗ್ಗೆ 10:30ರಿಂದ 12:30ರವರೆಗೆ ಹಾಗೂ ಕನ್ನಡ, ಇಂಗ್ಲೀಷ್ ಹಾಗೂ ಕಂಪ್ಯೂಟರ್ ಜ್ಞಾನ ವಿಷಯಗಳನ್ನೊಳಗೊಂಡ ಪತ್ರಿಕೆ-2 ಮಧ್ಯಾಹ್ನ 2:30 ರಿಂದ 4:30ರವರೆಗೆ ರಾಜ್ಯದ ನಾನಾ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ಜರುಗಲಿದೆ.
ಸದರಿ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಲಿಂಕ್-https://www.cetonline.karnataka.gov.in/KEA_EXAM_PORTAL/Forms/Candidates/Login ಮೂಲಕ ತಮ್ಮ ಅರ್ಜಿ ಸಂಖ್ಯೆ(ಅಪ್ಲಿಕೇಶನ್ ನಂಬರ್), ಅಭ್ಯರ್ಥಿಯ ಹೆಸರು ಬಳಸಿಕೊಂಡು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.
ರಾಜ್ಯ ಕಂದಾಯ ಇಲಾಖೆಯಲ್ಲಿ ಕೆಕೆ ವೃಂದದಡಿ ಖಾಲಿ ಇರುವ ಒಟ್ಟು 67 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಸೂಚನೆ ಸಂಖ್ಯೆ: ಇಡಿ/ಕೆಇಎ/27/ನೇ.ವಿ./2026(ಕೆಕೆ)ರ ಅಡಿ ಜು.10ರಂದು ಅಧಿಸೂಚನೆ ಹೊರಡಿಸಿ, ಜು.11ರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು.