ಜನವರಿ-2026ರ ವಾಣಿಜ್ಯ ಪರೀಕ್ಷೆಗೆ ಖಾಸಗಿಯಾಗಿ ನೋಂದಣಿಯಾಗಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಹೊರಡಿಸಿದ ಪ್ರಕಟಣೆ ತಿಳಿಸಿದೆ.
2026ರ ಜನವರಿಯಲ್ಲಿ ನಡೆಯುವ ವಾಣಿಜ್ಯ ಪರೀಕ್ಷೆಗಳಾದ ಆಂಗ್ಲ ಮತ್ತು ಕನ್ನಡ ಬೆರಳಚ್ಚು ಪರೀಕ್ಷೆ ಹಾಗೂ ಕನ್ನಡ ಮತ್ತು ಆಂಗ್ಲ ಶೀಘ್ರಲಿಪಿ ಪರೀಕ್ಷೆಗೆ ಹಾಜರಾಗಲು ಇಚ್ಚಿಸುವ ಅರ್ಹ ಮತ್ತು ಆಸಕ್ತ ಖಾಸಗಿ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದಾದರೂ ವಾಣಿಜ್ಯ ಶಿಕ್ಷಣ ಸಂಸ್ಥೆಗಳ ಮೂಲಕ ನೋಂದಾಯಿಸಿಕೊಳ್ಳಲು ನ.15ರವರೆಗೆ ಕಾಲಾವಕಾಶ ನೀಡಲಾಗಿದೆ.
• ನೋಂದಣಿ ಶುಲ್ಕವನ್ನು ಅಭ್ಯರ್ಥಿಗಳಿಂದ ಸ್ವೀಕರಿಸಲು ಪ್ರಾರಂಭದ ದಿನಾಂಕ – ಅಕ್ಟೋಬರ್ 30, 2025
• ನೋಂದಣಿ ಶುಲ್ಕವನ್ನು ಅಭ್ಯರ್ಥಿಗಳಿಂದ ಸ್ವೀಕರಿಸಲು ಕೊನೆಯ ದಿನಾಂಕ – ನವೆಂಬರ್ 13, 2025
• ನೋಂದಣಿ ಶುಲ್ಕವನ್ನು ನೆಫ್ಟ್ ಚಲನ್ ಮೂಲಕ ಬ್ಯಾಂಕ್‌ಗೆ ಹಣವನ್ನು ಪಾವತಿಸಲು ಕೊನೆಯ ದಿನಾಂಕ – ನವೆಂಬರ್ 15, 2025
• ನೋಂದಣಿ ಅರ್ಜಿ ನಮೂನೆಗಳನ್ನು ಪರೀಕ್ಷಾ ಶುಲ್ಕದೊಂದಿಗೆ ಮಂಡಲಿಗೆ ಕಳುಹಿಸಲು ಕೊನೆಯ ದಿನಾಂಕ – ನವೆಂಬರ್ 19, 2025
2026ರ ವಾಣಿಜ್ಯ ಪರೀಕ್ಷೆಗೆ ಖಾಸಗಿಯಾಗಿ ನೋಂದಾಯಿಸಲು ಯಾರೆಲ್ಲ ಅರ್ಹರು?
• 2026ರ ವಾಣಿಜ್ಯ ಪರೀಕ್ಷೆಗೆ ನೋಂದಾಯಿಸುವ ಅಭ್ಯರ್ಥಿಯು ಯಾವುದೇ ಸರ್ಕಾರಿ/ಸ್ಥಳೀಯ ಸಂಸ್ಥೆ/ರಿಜಿಸ್ಟರ್ಡ್ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ ಮೂರು ವರ್ಷ ಸೇವೆಯನ್ನು ಸಲ್ಲಿಸಿರಬೇಕು.
• ಖಾಸಗಿಯಾಗಿ ಬೆರಳಚ್ಚು ಅಥವಾ ಶೀಘ್ರಲಿಪಿ ಪ್ರೌಢ ದರ್ಜೆ/ಪ್ರವೀಣ ದರ್ಜೆ ಪರೀಕ್ಷೆಗೆ ಕುಳಿತುಕೊಳ್ಳಲು ಬಯಸುವವರು ಸಂಬಂಧಪಟ್ಟ ವಿಷಯದ ಪ್ರಥಮ ದರ್ಜೆ/ಪ್ರೌಢದರ್ಜೆ ಪರೀಕ್ಷೆಯಲ್ಲಿ 1 ವರ್ಷ ಮುಂಚಿತವಾಗಿಯೇ ಉತ್ತೀರ್ಣರಾಗಿರಬೇಕು.
• ಖಾಸಗಿಯಾಗಿ ವಾಣಿಜ್ಯ ಪರೀಕ್ಷೆಗೆ ಕುಳಿತುಕೊಳ್ಳಲು ಬಯಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮಾರ್ಚ್-2023 ತಿಂಗಳಲ್ಲಿ ಅಥವಾ ಅದಕ್ಕಿಂತ ಮುಂಚಿತವಾಗಿಯೇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಹಾಗೂ ಅಗತ್ಯ ಪ್ರಮಾಣ ಪತ್ರದ ನಕಲನ್ನು ಲಗತ್ತಿಸಬೇಕು.
ಖಾಸಗಿ ನೋಂದಣಿ ಶುಲ್ಕ ಹಾಗೂ ಪಾವತಿಸುವ ವಿಧಾನ
• ಎಲ್ಲಾ ಅಭ್ಯರ್ಥಿಗಳಿಗೂ – 180ರೂ.
• ಅಭ್ಯರ್ಥಿಗಳು ಖಾಸಗಿ ನೋಂದಣಿ ಶುಲ್ಕವಾಗಿ 180ರೂ. ಗಳನ್ನು ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಂಡಲಿಯ ಖಾತೆ ಸಂಖ್ಯೆ – 1261000109019723 IFSC Code: PUNB0126100 ಗೆ ನೆಫ್ಟ್ ಚಲನ್ ಮೂಲಕ ಜಮಾ ಮಾಡಬಹುದು.
ಅರ್ಜಿ ಸಲ್ಲಿಕೆ ಹೇಗೆ?
• ಅಭ್ಯರ್ಥಿಗಳು ತಮಗೆ ಹತ್ತಿರವಿರುವ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದಾದರೂ ವಾಣಿಜ್ಯ ಶಿಕ್ಷಣ ಸಂಸ್ಥೆಗಳ ಮೂಲಕ ನಿಗದಿತ ಅರ್ಜಿ ನಮೂನೆ ಹಾಗೂ ನೋಂದಣಿ ಶುಲ್ಕ 180ರೂ. ಗಳನ್ನು ಪಾವತಿಸಿದ ನೆಫ್ಟ್ ಚಲನ್‌ಗಳೊಂದಿಗೆ ತಮ್ಮ ಪ್ರಸ್ತಾವನೆಗಳನ್ನು – “ನಿರ್ದೇಶಕರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-03” ರವರಿಗೆ ಕಳುಹಿಸಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು.
• ನೋಂದಣಿ ಮಾಡಿಸಲು ಯಾವ ವಾಣಿಜ್ಯ ಸಂಸ್ಥೆಯ ಮೂಲಕ ನೋಂದಣಿ ಅರ್ಜಿಯನ್ನು ಕಳುಹಿಸಿರುತ್ತಾರೆಯೋ, ಅದೇ ವಾಣಿಜ್ಯ ಸಂಸ್ಥೆಗೆ ಅರ್ಹತೆ ಪಡೆದವರ ನೋಂದಣಿ ಪತ್ರವನ್ನು (ಎನ್‌ರೋಲ್‌ಮೆಂಟ್ ಸರ್ಟಿಫಿಕೇಟ್) ಕಳುಹಿಸಲಾಗುತ್ತದೆ.
• ನೋಂದಣಿ ಪ್ರಮಾಣ ಪತ್ರಗಳನ್ನು (ಎನ್‌ರೋಲ್‌ಮೆಂಟ್ ಸರ್ಟಿಫಿಕೇಟ್) ಸಂಬಂಧಪಟ್ಟ ಸಂಸ್ಥೆಯ ಪ್ರಾಂಶುಪಾಲರುಗಳಿಂದ ಪಡೆದು, ನಂತರದಲ್ಲಿ ಸಂಸ್ಥೆಯ ಮೂಲಕ ಅರ್ಜಿ ಹಾಗೂ ಪರೀಕ್ಷಾ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪರೀಕ್ಷಾ ಮಂಡಲಿಗೆ ಸಲ್ಲಿಸಬಹುದು.
ಅಭ್ಯರ್ಥಿಗಳ ಗಮನಕ್ಕೆ: ನೋಂದಣಿ ಮಾಡಲು ಸಲ್ಲಿಸಬೇಕಾದ ಅರ್ಜಿ ಶುಲ್ಕ ಮತ್ತು ಇತರೆ ಅವಶ್ಯಕವಾದ ದಾಖಲೆಗಳನ್ನು ಹತ್ತಿರವಿರುವ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ವಾಣಿಜ್ಯ ಸಂಸ್ಥೆಯ ಮುಖಾಂತರವೇ ಕಳುಹಿಸಬೇಕು.