ಮಹಿಳಾ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು ಅ.31 ಕೊನೆದಿನ

Published on:

ಬೆಂಗಳೂರು: ಕರ್ನಾಟಕ ಸರ್ಕಾರದ ಉದ್ಯಮವಾದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2026-27ನೇ ಸಾಲಿಗೆ ಮಹಿಳೆಯರ ಸಬಲೀಕರಣ ಹಾಗೂ ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳಿಗೆ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಉದ್ಯೋಗಿನಿ ಯೋಜನೆ, ಚೇತನ ಯೋಜನೆ, ಧನಶ್ರೀ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ ಮತ್ತು ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. 20 ರಿಂದ 55 ವರ್ಷ ವಯೋಮಾನದ ಮಹಿಳಾ ಅಭ್ಯರ್ಥಿಗಳು ಅ.31ರ ಸಂಜೆ 5:30ರೊಳಗೆ ಆನ್‌ಲೈನ್‌ ಅಥವಾ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ಯೋಜನೆಗಳು ಮತ್ತು ಅರ್ಹತೆಗಳು:

ಈ ಹಿಂದೆ ನಿಗಮದ ಯಾವುದೇ ಯೋಜನೆಯಡಿ ಪ್ರಯೋಜನ ಪಡೆದಿದ್ದಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಲ್ಲದೆ, ಹಿಂದಿನ ವರ್ಷಗಳಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗದವರು ಈ ವರ್ಷ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.

ಉದ್ಯೋಗಿನಿ ಯೋಜನೆ:

ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕುಗಳಿದ ಕನಿಷ್ಠ ರೂ.50,000/- ದಿಂದ ಗರಿಷ್ಠ ರೂ.3.00 ಲಕ್ಷಗಳವರೆಗೆ ಸಾಲ ಒದಗಿಸಲಾಗುತ್ತದೆ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ: ವಾರ್ಷಿಕ ಆದಾಯ ಮಿತಿ ರೂ.2.00 ಲಕ್ಷ ಇರಬೇಕು. ಶೇ.75 ರಷ್ಟು ಅಥವಾ ಗರಿಷ್ಠ ರೂ.2.00 ಲಕ್ಷಗಳವರೆಗೆ ಸಹಾಯಧನ ಸಿಗಲಿದೆ.

ಇತರ ವರ್ಗದವರಿಗೆ: ವಾರ್ಷಿಕ ಆದಾಯ ಮಿತಿ ರೂ.1.50 ಲಕ್ಷ ಇರಬೇಕು. ಶೇ.30 ರಷ್ಟು ಅಥವಾ ಗರಿಷ್ಠ ರೂ.90,000/- ವರೆಗೆ ಸಹಾಯಧನ ಸಿಗಲಿದೆ.

ವಯೋಮಿತಿ: ಅಭ್ಯರ್ಥಿಯು 21 ರಿಂದ 55 ವರ್ಷ ವಯೋಮಿತಿ ಹೊಂದಿರಬೇಕು.

ಚೇತನ ಯೋಜನೆ:

ದಮನಿತ ಮಹಿಳೆಯರು ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ರೂ.45,000/- ಗಳ ಪ್ರೋತ್ಸಾಹಧನ ನೀಡಲಾಗುತ್ತದೆ.

ವಯೋಮಿತಿ: 20 ರಿಂದ 55 ವರ್ಷ. (ಅರ್ಜಿಯನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳಲ್ಲಿ ಸಲ್ಲಿಸಬಹುದು).

ಧನಶ್ರೀ ಯೋಜನೆ:

ಹೆಚ್.ಐ.ವಿ/ಏಡ್ಸ್ ಸೋಂಕಿತ ಅಥವಾ ಬಾಧಿತ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ರೂ.45,000/- ಗಳ ಪ್ರೋತ್ಸಾಹಧನ ನೀಡಲಾಗುತ್ತದೆ.

ವಯೋಮಿತಿ: 20 ರಿಂದ 55 ವರ್ಷ. (ಅರ್ಜಿಯನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳಲ್ಲಿ ಸಲ್ಲಿಸಬಹುದು).

ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ:

ಲಿಂಗತ್ವ ಅಲ್ಪಸಂಖ್ಯಾತರು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ. 45,000/- ಗಳ ಪ್ರೋತ್ಸಾಹಧನ ನೀಡಲಾಗುತ್ತದೆ.

ವಯೋಮಿತಿ: 20 ರಿಂದ 55 ವರ್ಷ.

ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ:

ಮಾಜಿ ದೇವದಾಸಿ ಮಹಿಳೆಯರು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ. 45,000/- ಗಳ ಪ್ರೋತ್ಸಾಹಧನ ನೀಡಲಾಗುತ್ತದೆ.

ವಯೋಮಿತಿ: 20 ರಿಂದ 55 ವರ್ಷ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೀಗೆ…

ಸದರಿ ಎಲ್ಲಾ ಯೋಜನೆಗಳ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ (ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್) ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ.

ಆಫ್‌ಲೈನ್ ಸಲ್ಲಿಕೆ: ಚೇತನ ಮತ್ತು ಧನಶ್ರೀ ಯೋಜನೆಗಳಿಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರು ನಿಗದಿತ ಅವಧಿಯೊಳಗೆ ಅಗತ್ಯ ದಾಖಲೆಗಳೊಂದಿಗೆ ತಮ್ಮ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಅಥವಾ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕರನ್ನು ಸಂಪರ್ಕಿಸಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

ಅರ್ಜಿದಾರರಿಗೆ ಪ್ರಮುಖ ಸೂಚನೆಗಳು:

ಆಧಾರ್ ಜೋಡಣೆ: ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿರಬೇಕು.

ವಿವೇಚನಾ ಕೋಟಾ: ಸರ್ಕಾರದ ಅಥವಾ ನಿಗಮದ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಛಿಸುವವರು ಮಾನ್ಯ ಸಚಿವರು/ಶಾಸಕರು ಅಥವಾ ನಿಗಮದ ಅಧ್ಯಕ್ಷರ ಶಿಫಾರಸ್ಸು ಪತ್ರ ಪಡೆದು ಸೇವಾ ಸಿಂಧು ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ: ಸಾರ್ವಜನಿಕರು ತಮ್ಮ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು, ನಿಗಮದ ಅಭಿವೃದ್ಧಿ ನಿರೀಕ್ಷಕರು ಅಥವಾ ನಿಗಮದ ಅಧಿಕೃತ ವೆಬ್‌ಸೈಟ್ (https://kswdc.karnataka.gov.in) ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 080-26632792 / 080-26632973 ಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment