ಸರ್ಕಾರಿ ಕಚೇರಿಗಳಲ್ಲಿ ರಾರಾಜಿಸುವ “ಸರ್ಕಾರದ ಕೆಲಸ ದೇವರ ಕೆಲಸ” ಘೋಷವಾಕ್ಯ ಕೇವಲ ಗೋಡೆಯ ಮೇಲೆ ಗೀಚಿದ ಸಾಲುಗಳಾದವೇ ವಿನಃ ಕಾರ್ಯರೂಪಕ್ಕೆ ತರುವಲ್ಲಿ ಸರ್ಕಾರಿ ನೌಕರರು ಮುಂದಾಗಲಿಲ್ಲ. ಇದಕ್ಕೆ ತದ್ವಿರುದ್ಧವಾಗಿ ‘ಸರ್ಕಾರಿ ಕೆಲಸ ಚನ್ನಾಗಿ ದುಡ್ಡು ಮಾಡುವ ಕೆಲಸ’ ಎಂಬ ತಮ್ಮದೇ ಧ್ಯೇಯಕ್ಕೆ ಬದ್ಧರಾದರು. ಆದರೂ ಕೆಲವು ನಿಷ್ಠಾವಂತ, ಪ್ರಾಮಾಣಿಕ, ದಕ್ಷ ನೌಕರರು ಬೆರಳೆಣಿಕೆಯಷ್ಟು ಇದ್ದಾರೆ. ಅಂತವರಿಗೆ ನಮ್ಮದೊಂದು ಸಲಾಂ. ಇಂತಹ ಭ್ರಷ್ಟ ವ್ಯವಸ್ಥೆಯಲ್ಲಿ ಬದಲಾವಣೆ ಛಾಯೆ ಮೂಡುವುದಾದರೂ ಯಾವಾಗ?
ಗ್ರಾಮ ಪಂಚಾಯತ್ ಕಂಪ್ಯೂಟರ್ ಆಪರೇಟನ್ನಿಂದ ಹಿಡಿದು ಉನ್ನತ ಹುದ್ದೆಯಲ್ಲಿರುವ ಸರ್ಕಾರಿ ನೌಕರರು ನೇರವಾಗಿ ಇಲ್ಲವೇ ಪರೋಕ್ಷವಾಗಿ ಬಡಜನರ ಬೆವರಿನ ಹಣವನ್ನ ಸುಲಿಗೆ ಮಾಡಿ, ಅದರ ಮೇಲೆ ತಮ್ಮ ಕನಸಿನ ಸೂರು ನಿರ್ಮಿಸಿಕೊಳ್ಳುವ ಮಹಾಶಯರು. ಇನ್ನೂ ಕೆಲವು ವಿದ್ಯಾವಂತ ಜನರು ಹಣದ ದಾಹದಿಂದ ಕಾನೂನುಬಾಹಿರ ಕೆಲಸಗಳ ಮೂಲಕ ಇಂತಹ ನೌಕರಿಗೆ ಪುಷ್ಠಿನೀಡುತ್ತಿದ್ದಾರೆ ಎಂದರೆ ತಪ್ಪಾಗದು.
ಅಮಾನತ್ತು ಮಾತ್ರವಲ್ಲ, ಕಠಿಣ ಕ್ರಮ ಅಗತ್ಯ: ಯಾವುದೇ ಸರ್ಕಾರಿ ನೌಕರರು ಕರ್ತವ್ಯಲೋಪ ಅಥವಾ ಭ್ರಷ್ಟಾಚಾರ ಎಸಗಿರುವುದು ಸಾಬೀತಾದರೆ, ಅಮಾನತ್ತು ಮಾಡುವ ಬದಲು, ಅಂತಹವರ ವಿರುದ್ಧ ಸೇವಾ ನಿಯಮಾನುಸಾರ ಕಠಿಣ ಕ್ರಮ ಕೈಗೊಂಡು ನೇರವಾಗಿ ವಜಾ ಅಥವಾ ಪದಚ್ಯುತಿಗೊಳಿಸುವ ಕ್ರಮವನ್ನು ಸಂಬಂಧಪಟ್ಟ ಇಲಾಖೆ ಮಾಡಬೇಕಾಗಿದೆ. ಆಗಲಾದರೂ ವ್ಯವಸ್ಥೆಯಲ್ಲಿ ಬದಲಾವಣೆ ಆಗಬಹುದೇನೋ!
ಜನರೇ ಪ್ರಶ್ನಿಸಿ: ಸರ್ಕಾರಿ ಕಚೇರಿಗಳಲ್ಲಿ ಸೌಲಭ್ಯಗಳಿಗೆ ನಿಗದಿತ ಶುಲ್ಕ(ಹಣ)ಕ್ಕಿಂತ ಹೆಚ್ಚಿನ ಪ್ರಮಾಣ ಶುಲ್ಕ ಕೇಳಿದ್ದಲ್ಲಿ, “ಯಾಕಿಷ್ಟು?” ಎಂದು ಪ್ರಶ್ನಿಸಿ. ಅದು ನಮ್ಮ ಹಕ್ಕು, ಸಾಂವಿಧಾನಿಕ ಹಕ್ಕು. “ಇರಲಿ ನಮ್ಮ ಕೆಲಸ ಆದರೆ ಸಾಕು” ಎಂಬ ಮನೋಭಾವ ಪ್ರಶ್ನೆ ಮಾಡುವ ಹಕ್ಕನ್ನ ನುಂಗುತ್ತಿದೆ.
ದೂರು ನೀಡಿ: ಕೆಲಸ ಮಾಡಿಕೊಡಲು ಹಣ ಬೇಡಿಕೆಯಿಟ್ಟಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲು ಹಿಂಜರಿಕೆ ಮಾಡಬೇಡಿ.
ಬದಲಾವಣೆ ಬಯಸುವ ನಾವು, ಮೊದಲು ನಾವು ಬದಲಾಗಬೇಕು ಅಂದಾಗ ಮಾತ್ರ ಏನಾದರೂ ಪ್ರಗತಿ ಸಾಧ್ಯ.. ಬದಲಾಗ್ತೀರಾ ಅಲ್ವಾ?